ಹಿಂದೆ ಬಳಸುತ್ತಿದ ಪ್ಯಾರಾಫಿನ್ ಅಥವಾ ಸೀಮೆ ಎಣ್ಣೆ ದೀಪಗಳು ನಮಗೀಗ ಪ್ರಾಚೀನ ವಸ್ತುಗಳಂತೆ ಅನಿಸಬಹುದು. ಆದರೆ ನಮ್ಮ ಹಿರಿತಲೆಗಳಿಗೆ ಅದು ತುಂಬಾ ಚಿರಪರಿಚಿತ ವಸ್ತು, ನಮಗೆ ಅದು ನಮ್ಮ ಸಂಗ್ರಹಗಳ ಸಾಲಿನಲ್ಲಿ ಅಪರೂಪವಾದ ವಸ್ತುವಾಗಿ ಒಂದು ಸಣ್ಣ ಜಾಗವನ್ನು ಪಡೆಯುವುದಕ್ಕೆ ಮಾತ್ರ ಸೀಮಿತವಾಗಿವೆ.

ಆಗಸ್ಟ್ 5, 1905 ಕ್ಕೂ ಮೊದಲು ಸೀಮೆಎಣ್ಣೆ ದೀಪಗಳು ಬೆಂಗಳೂರಿಗರ ದೈನಂದಿನ ಜೀವನದ ಒಂದು ಭಾಗವಾಗಿತ್ತು. ಅವುಗಳನ್ನು ಸ್ವಚಗೊಳಿಸುವ, ಎಣ್ಣೆ ತುಂಬಿಸುವ ಮತ್ತು ಬೆಳಗಿಸುವ ಕಾರ್ಯಕ್ಕೆಂದೇ ಸ್ಥಳೀಯ ಆಡಳಿತದಿಂದ 3 ಜನರನ್ನು ಹಾಗೆಯೇ ನಗರದ ಸಂಪೂರ್ಣ ಬೆಳಕಿನ ಕಾರ್ಯಾಚರಣೆಯ ಮೇಲ್ವಿಚಾರಣೆಗೆಂದು ಇನ್ಸ್‌ಪೆಕ್ಟರ್‌ ಒಬ್ಬರನ್ನು ನೇಮಿಸಲಾಗಿತ್ತು. ಬೀದಿ ದೀಪಗಳನ್ನು ಬೆಳಗಿಸುವ, ವಿಕ್ಟೋರಿಯ ಯುಗದ ಅಭ್ಯಾಸವು ಅದರ ಹಳೆಯ-ಪ್ರಪಂಚದ ಮೋಡಿಯನ್ನು ಹೊಂದಿತ್ತು. ಆದರೆ ಬೆಂಗಳೂರು ಶತಮಾನದ ತಿರುವಿನಲ್ಲಿ ತಂದ ಬದಲಾವಣೆಗಳನ್ನು ಅನುಸರಿಸುವ ಹೊಸ ಹಾದಿಯಲ್ಲಿತ್ತು. ಏಷ್ಯಾ ಖಂಡದಲ್ಲೇ ಮೊದಲ ವಿದ್ಯುತ್ ದೀಪಗಳನ್ನು ಅಳವಡಿಸಿದ ನಗರವನ್ನಾಗಿ ಮಾಡಲು ಕಾರಣರಾದ ವ್ಯಕ್ತಿಯ ಪರಿಚಯವನ್ನು ಇಲ್ಲಿ ಮಾಡಲೇ ಬೇಕು.

ಬ್ರಿಟನ್ ಮೂಲದ ವಿಲಿಯಂ ಮ್ಯಾಕ್‌ಹಚಿನ್, ಮದ್ರಾಸ್ ಸಿವಿಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ತರಬೇತಿ ಪಡೆದು ಅಂದಿನ ಲೋಕೋಪಯೋಗಿ ಇಲಾಖೆಯಲ್ಲಿ ಬೆಂಗಳೂರಿನ ಮುಖ್ಯ ಎಂಜಿನಿಯರ್ ಆಗಿದ್ದರು. ಅವರು ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯಾರ್ ಅವರಿಗೆ ಬೆಂಗಳೂರನ್ನು ವಿದ್ಯುದ್ದೀಕರಿಸುವ ಅಗತ್ಯದ ಬಗ್ಗೆ ಪತ್ರ ಬರೆದು ತಿಳಿಸಿದರು. ಈ ದೂರದೃಷ್ಟಿಯ ಯೋಜನೆಯಲ್ಲಿ ಬೆಂಗಳೂರು ನಗರವನ್ನು ಬೆಳಗಿಸಲು ಶಿವನಸಮುದ್ರ ಜಲವಿದ್ಯುತ್ ಕೇಂದ್ರದಿಂದ (ಆ ಸಮಯದಲ್ಲಿ ಕೋಲಾರ ಚಿನ್ನದ ಗಣಿಗೆಗೆ ವಿದ್ಯುತ್ ಉತ್ಪಾದಿಸುತ್ತಿತ್ತು) ಉತ್ಪಾದಿಸಿದ 300 ರಿಂದ 400 ಎಚ್‌ಪಿ ಹೆಚ್ಚುವರಿ ಶಕ್ತಿಯನ್ನು ಬೇರೆಡೆಗೆ ತಿರುಗಿಸಲು ಅವರು ಪ್ರಸ್ತಾಪಿಸಿದರು. 1904 ರ ಮೇ 30 ರಂದು ಮಹಾರಾಜರಿಂದ ಅಧಿಕೃತ ಅನುಮೋದನೆ ಪಡೆದ ನಂತರ, ಈ ಮಹತ್ವದ ಯೋಜನೆಯನ್ನು ಪ್ರಾರಂಬಿಸಿದರು.

ಅಂದಾಜು ರೂ. 7.46 ಲಕ್ಷ ವೆಚ್ಚದೊಂದಿಗೆ, ಈ ಯೋಜನೆಯು ಮೊದಲು ಕನಕಪುರದಲ್ಲಿ ಪ್ರಾರಂಭವಾಯಿತು, ಸ್ವಿಚ್ ಸ್ಟೇಷನ್ ಸ್ಥಾಪನೆ ಮತ್ತು ನಗರದೆಲ್ಲೆಡೆ 92 ಕಿ.ಮೀ ಉದ್ದದ ವಿದ್ಯುತ್ ಸರಬರಾಜು ಮಾರ್ಗಗಳನ್ನು ಕೇವಲ ಒಂಬತ್ತು ತಿಂಗಳಲ್ಲಿ ನಿರ್ಮಿಸಲಾಯಿತು. ಈ ಯೋಜನೆಯಡಿ ಕನಕಪುರದಿಂದ ಪಡೆಯುತ್ತಿದ್ದ ವಿದ್ಯುತ್ ಶಕ್ತಿಯನ್ನು ಪಡೆಯಲು 450 ಕೆ ವಿ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ ಒಂದನ್ನು ವಿಕ್ಟೋರಿಯಾ ಆಸ್ಪತ್ರೆಯ ಬಳಿ ಸಬ್‌ಸ್ಟೇಷನ್ ಆಗಿ ನಿರ್ಮಿಸಲಾಯಿತು. “ಕನಪುರದಲ್ಲಿ ಮೂಲವಾಗಿ ನಿರ್ಮಿತವಾಗಿದ್ದ ಸ್ಟೇಷನ್ ಕಟ್ಟಡವೂ ಇತ್ತೀಚಿಗೆ ನಿರ್ಮಿಸಿರುವ ಹೊಸ ಕಟ್ಟಡದ ಪಕ್ಕದಲ್ಲೇ ಇದೆ” ಎಂದು ‘ಬೆಳಗಿತು ಕರ್ನಾಟಕ’ ಪುಸ್ತಕದ ಲೇಖಕರಾದ ಗಜಾನನ ಶರ್ಮಾ ಹೇಳಿದ್ದಾರೆ.

ವಿದ್ಯುದ್ದೀಕರಣ ಯೋಜನೆಗೆ ಅಡಿಪಾಯ ಹಾಕಿದ ಒಂಬತ್ತು ತಿಂಗಳ ನಂತರ, ಬೆಂಗಳೂರು 1905 ರ ಆಗಸ್ಟ್ 5 ರಂದು ವಿದ್ಯುತ್ ಬೀದಿ ದೀಪಗಳನ್ನು ಬೆಳಗಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಕಾರ್ಯಕ್ರಮವನ್ನು ವೈಸ್‌ರಾಯ್ ಕೌನ್ಸಿಲ್ ನ ಸದಸ್ಯರಾಗಿದ್ದ ಸರ್ ಜಾನ್ ಹೆವೆಟ್ ಅವರು ಕೆ ಆರ್ ಮಾರುಕಟ್ಟೆಯಲ್ಲಿ ನೆರೆದ್ದಿದ ಜನರ ಗುಂಪಿನ ನಡುವೆ ಉದ್ಘಾಟಿಸಿದರು. ಆ ಐತಿಹಾಸಿಕ ದಿನದಂದು 100 ಕ್ಕೂ ಹೆಚ್ಚು ವಿದ್ಯುತ್ ದೀಪಗಳು ಬೆಂಗಳೂರಿನ ಆಕಾಶವನ್ನು ಪ್ರಕಾಶವನ್ನಾಗಿಸಿದವು. ಈ ಕಾರ್ಯಕ್ರಮ ನಗರದಲ್ಲಿ ಪ್ರಗತಿಪರ ಯೋಜನೆಗಳು ಚಾಲನೆ ಪಡೆಯಲು ಪುಷ್ಟಿ ನೀಡಿದವು.

ವಿದ್ಯುತ್ ಬೀದಿ ದೀಪಗಳು ಬೆಂಗಳೂರಿಗರಿಗೆ ಹೊಸ ಜೀವನ ವಿಧಾನದ ಆರಂಭವನ್ನು ಸೂಚಿಸಿದವು. ಇದನ್ನು ಕೆ ಆರ್ ಮಾರುಕಟ್ಟೆ ಸಮೀಪವಿದ್ದ ಶ್ರೀಮಂತ ನಿವಾಸಿಗಳು ಕೂಡಲೇ ಅಳವಡಿಸಿಕೊಂಡರು. ಬೆಂಗಳೂರು ವಿದ್ಯುತ್ ಮತ್ತು ಬೆಳಕಿನ ಯೋಜನೆಯ ಅಧಿಕೃತ ವರದಿಯ ಪ್ರಕಾರ, ಜೂನ್ 1906 ರ ಹೊತ್ತಿಗೆ,ನಗರದಲ್ಲಿ 861 ಬೀದಿ ದೀಪಗಳು ಮತ್ತು 1,639 ಗೃಹಬಳಕೆಯ ಸಂಪರ್ಕಗಳಿದ್ದವು ಮತ್ತು 36,476 ರೂ. ಆದಾಯವನ್ನು ಗಳಿಸಿತ್ತು. 16 ಕ್ಯಾಂಡಲ್ ಬಲ್ಬ್ (ಇಂದಿನ 40 ವ್ಯಾಟ್‌ಗಳಿಗೆ ಸಮ) ನಿವಾಸಿಗಳಿಗೆ ಪ್ರತಿ ತಿಂಗಳು ರೂ 1 (ಆ ಸಮಯದಲ್ಲಿ ಭಾರಿ ಬಿಲ್) ವೆಚ್ಚವಾಗುತ್ತಿತ್ತು.

ಕರ್ನಾಟಕ ರಾಜ್ಯ ದಾಖಲೆಗಳಿಂದ ಬಂದ ಫೈಲ್‌ಗಳಲ್ಲಿ ಮೇಜರ್ ಡಿ ಲೊಟ್ಬಿನಿಯೆರೆ ಸಂಕಲ್ಪಿಸಿದ ಬೆಂಗಳೂರು ವಿದ್ಯುತ್ ಮತ್ತು ಬೆಳಕಿನ ಯೋಜನೆ 1904-05ರಲ್ಲಿ ವಾರ್ಷಿಕ ನಿರ್ವಹಣಾ ವೆಚ್ಚ 50,000 ರೂ ಮತ್ತು ಅಂದಾಜು ವಾರ್ಷಿಕ ಆದಾಯ 1.18 ಲಕ್ಷ ರೂ ಎಂದು ಉಲ್ಲೇಖಿಸಲಾಗಿದೆ. 1905 ರ ನಂತರ ನಿವಾಸಿಗಳ ಆರಂಭಿಕ ಬದಲಾವಣೆಯನ್ನು ಗಮನಿಸಿ, ಅದರ ಸಾಕ್ಷಿಯಾಗಿ ಬೆಂಗಳೂರು ಜನಸಂಖ್ಯೆಯ ಗಮನಾರ್ಹ ಭಾಗವು ವಿದ್ಯುತ್ ಶಕ್ತಿಗೆ ಬದಲಾಗುವುದನ್ನು ಅವರು ಮುನ್ಸೂಚಿಸಿದ್ದರು.

ಕಬ್ಬಿಣದ ವಿದ್ಯುತ್ ಬೀದಿ ದೀಪಗಳನ್ನು ನಗರದಲ್ಲಿ ಸ್ಥಾಪಿಸಿ 115 ವರ್ಷಗಳು ಕಳೆದಿವೆ. ಅವರ ಹಿಂದಿನ ವೈಭವದಲ್ಲಿ ಇಲ್ಲದಿದ್ದರೂ, 1905 ರ ಆಗಸ್ಟ್ 5 ರಂದು ರಾತ್ರಿ ಬೆಳಗಿದ ಆ 30 ಅಡಿ ದೀಪದ ಎರಡು ಪೋಸ್ಟ್ಗಳು ಕಾರ್ಪೊರೇಷನ್ ಸರ್ಕಲ್‌ನಲ್ಲಿರುವ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಇನ್ನೂ ಅಸ್ತಿತ್ವದಲ್ಲಿವೆ.

ಇದು ಇಂದಿಗೆ ಅತ್ಯಲ್ಪವೆಂದು ಕಾಣುತ್ತದೆ, ಆದರೂ ಈ ಕಡೆಗಣಿಸಲ್ಪಟ್ಟ ಕಲಾಕೃತಿಗಳು ನಮ್ಮ ಬೆಂಗಳೂರಿನ ಇತಿಹಾಸ,  ವಿಶಿಷ್ಟವಾದ ಮುಂದಾಲೋಚನೆಯ ಲಕ್ಷಣಗಳು ಮತ್ತು ಮುಕ್ತ ಮನಸ್ಸಿನ ಮನೋಭಾವವನ್ನು ಸಂಕೇತಿಸುತ್ತವೆ. ಏಷ್ಯಾದ ಉಳಿದ ಭಾಗವು “ಕತ್ತಲೆಯ” ಸ್ಥಿತಿಯಲ್ಲಿದ್ದ ಸಮಯದಲ್ಲಿ, ಬೆಂಗಳೂರು ಆಧುನಿಕತೆಯ ಚುಕ್ಕಾಣಿಯನ್ನು ವಶಪಡಿಸಿಕೊಂಡು ನಮ್ಮ ಪ್ರಸ್ತುತ ಉದಯೋನ್ಮುಖ  ಮತ್ತು ವಿಶ್ವದ ಪ್ರಮುಖ ಐಟಿ ಹಬ್‌ಗಳಲ್ಲಿ ಒಂದಾಗಲು ದಾರಿ ಮಾಡಿಕೊಟ್ಟಿದೆ.

ಆಗಸ್ಟ್ 5, 1905 , ನಾವು ಇಂದು ಎಲ್ಲಿದ್ದೇವೆಯೋ ಅಲ್ಲಿಗೆ ತಲುಪಲು ನಮ್ಮ ಹಾದಿಯನ್ನು ಬೆಳಗಿಸಿದೆ.‌ಹಾಗೆಯೇ ಅದೇ ಮಾರ್ಗ ಭವಿಷ್ಯದತ್ತ ನಮ್ಮ ಹಾದಿಯನ್ನು ಬೆಳಗಿಸುತ್ತಿದೆ.