KAVERI KEDARNATH

ಗೃಹಣಿಯ ಚಿತ್ತ ಸಮಾಜದತ್ತ…

ಸಾವಿರ ಮೈಲಿನ ಪ್ರಯಾಣ ಶುರುವಾಗುವುದು ಒಂದು ಸಣ್ಣ ಹೆಜ್ಜೆಯಿಂದ.ಅಂತದೊಂದು ಆರಂಭವು ಎಷ್ಟೊ ಸಮಸ್ಯೆಗಳಿಗೆ ಅಂತ್ಯಹಾಡುತ್ತದೆ. ಸಮಾಜದಲ್ಲಿನ ಒಳ್ಳೆಯದು, ಕೆಟ್ಟದು,ಸಮಸ್ಯೆಗಳು ಏರಿಳತಗಳು ಎಲ್ಲವು ನಮ್ಮ ಜೀವನದ ಭಾಗವಾಗಿದೆ. ನಮ್ಮಲ್ಲಿ ಸಮಸ್ಯೆಗಳ ಅಲೆಯನ್ನು ಎದುರಿಸುವವರಿಗಿಂತ ಅದರೊಂದಿಗೆ ಈಜುವವರೆ ಹೆಚ್ಚು. ಹಲವರಿಗೆ ಸಮಸ್ಯೆಗಳನ್ನು ಎದುರಿಸುವಷ್ಟು ಶಕ್ತಿ,ತಾಳ್ಮೆ,ಧೈರ್ಯ, ಇಲ್ಲದಿರಬಹುದು, ಹಾಗೆಂದ ಮಾತ್ರಕ್ಕೆ   ಎಲ್ಲರು ಹಾಗಿರುವುದಿಲ್ಲ. ಒಂದಷ್ಟು ಜನರು ವ್ಯವಸ್ಥೆಯನ್ನು ಹಾಗು ಸರ್ಕಾರವನ್ನು ಪ್ರಶ್ನಿಸುತ್ತಾರೆ.ಹೊಸ ಕಾರ್ಯತಂತ್ರಗಳನ್ನು ಪ್ರಯತ್ನಿಸುತ್ತಾರೆ.ಸಾಲದಕ್ಕೆ ತಮ್ಮ ಸುತ್ತಮುತ್ತಲಿನವರಿಗೂ ಪ್ರೇರೆಪಿಸುತ್ತ ಸಮಸ್ಯಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕೆ ನೆರವಾಗುತ್ತಾರೆ. ಅಂತಹವರನಲ್ಲವೇ ನಾವು ನಾಯಕರೆಂದು ಕರೆಯುವುದು.

ಪುರುಷ ಪ್ರದಾನ ಸಮಾಜದಲ್ಲಿ ಗಂಡ, ಮನೆ, ಇಷ್ಟರಲ್ಲೆ ತೃಪ್ತಿ ಪಡೆದಕೊಳ್ಳುವ ಹೆಂಗಳೆಯರ ನಡುವೆ ಮಗಳನ್ನು ಅಪ್ರತಿಮ ಈಜುಗಾರ್ತಿ ಮತ್ತು ಸಂಗೀತಗಾರ್ತಿಯನ್ನಾಗಿ ಮಾಡಿ ,ಮನೆ ಸಂಸಾರ ಎಲ್ಲವನ್ನು ತುಲನಾತ್ಮಕವಾಗಿ ನಿಭಾಯಿಸುತ್ತಾ ,ಸಮಾಜದ ಹಲವಾರು ಸಮಸ್ಯೆಗಳಿಗೆ ಸಕ್ರೀಯವಾಗಿ ಸ್ಪಂದಿಸುತ್ತ, ತಮ್ಮ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ, ಪ್ರತಿಯೊಬ್ಬರಿಗೂ ಸರ್ಕಾರದ ಸವಲತ್ತುಗಳು ದೊರೆಯಬೇಕು ಎಂದು ಕೆಲಸ ನಿರ್ವಹಿಸುತ್ತಿರುವ,  ತಮ್ಮ ಸೇವೆಗಳನ್ನು ತನ್ನ ಕೊನೆಯ ದಿನದವರೆಗೂ ಮುಂದುವರೆಸಬೇಕೆಂಬ ಗುರಿಹೊತ್ತಿರುವ ನಾಯಕಿ ಕಾವೇರಿ, ಎಷ್ಟೋ ಗೃಹಿಣಿಯರಿಗೆ ಮಾದರಿಯಾಗಿದ್ದಾರೆ.

ಕಾವೇರಿಯವರು ತಮ್ಮ ಬಡಾವಣೆಯಲ್ಲಿ (ಮಲ್ಲೇಶ್ವರಂ) ಸಾಮಾಜಿಕ ಕಾರ್ಯಗಳಿಂದಲೇ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ .ಬೆಂಗಳೂರಿನ ನಾಗರೀಕರು ಕಸದ ಸಮಸ್ಯೆ ಬಗ್ಗೆ ಸರ್ಕಾರವನ್ನು ದೂರುತ್ತಿದ್ದರೆ,ಕಾವೇರಿ ಸರ್ಕಾರ ಸೂಚಿಸಿದ್ದ ಪರಿಹಾರವನ್ನು ತಮ್ಮ ಮನೆಯಲ್ಲಿ ಪರೀಕ್ಷಿಸಿ ಸೈ ಎನಿಸಿಕೊಂಡಿದ್ದಾರೆ.ಮನೆಯಲ್ಲಿರುವ ಹಸಿಕಸವನ್ನು ಸಂಗ್ರಹಿಸಿ ಏರೋಬಿಕ್ ವಿಧಾನದಿಂದ ಮನೆಯಲ್ಲೇ ಗೊಬ್ಬರ ತಯಾರಿಸುತ್ತಿದ್ದಾರೆ.ಅಂತಹ ಗೊಬ್ಬರವನ್ನು ಮಾರುಕಟ್ಟೆಯ ಶೇಖಡ ಅರ್ಧದಷ್ಡು ಬೆಲೆಗೆ ನೆರೆಹೊರೆಯವರಿಗೆ ಮಾರುವುದರ ಮೂಲಕ ಕಸದ ವಿಂಗಡಣೆ ಹಾಗು ಗೊಬ್ಬರ ತಯಾರಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.ಇದರೊಂದಿಗೆ ಮಹಿಳಾ ಸಬಲೀಕರಣದ ಕೆಲಸಗಳಲ್ಲೂ ಆಸಕ್ತಿ ಹೊಂದಿರುವ ಇವರು,ವಿವಿಧ ಸಂಘಟನೆಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡಿದ್ದು  ಹಲವಾರು ಮಹಿಳೆಯರ ಜೀವನಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಇಷ್ಟಲ್ಲದೇ ಸ್ವಸಹಾಯ ಸಂಘಗಳನ್ನು ಪ್ರಾರಂಭಿಸಿ ಹೆಂಗಸರಿಗೆ ತಮ್ಮ ಕಾಲು ಮೇಲೆ ತಾವು ನಿಲ್ಲಲು ನೆರವಾಗುತ್ತಿದ್ದಾರೆ.ಜೊತೆಗೆ ಸರ್ಕಾರದ ವಿವಿಧ ಉಚಿತ ಕೌಶಲ್ಯಾಭಿವೃದ್ದಿ ಸೌಲಭ್ಯಗಳನ್ನು ಮಹಿಳೆಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿ.ಎ ಪದವಿದರರಾದ ಕಾವೇರಿ ಶಾಲಾದಿವಸಗಳಲ್ಲಿಯೆ ಶಾಲಾಮಟ್ಟದ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದರು.ಪದವಿ ಮುಗಿದ ಬೆನ್ನಲ್ಲೆ ಮದುವೆಯಾದ ಕಾರಣ,ಹದಿನಾರು ವರ್ಷಗಳ ಕಾಲ ಸಂಸಾರದ ಚೌಕಟ್ಟಿಗೆ ಸೀಮಿತವಾದರು.ಆದರೆ ಸಮಾಜದ ಕೆಲ ಘಟನೆಗಳು ಇವರ ನಾಯಕತ್ವ ಗುಣಗಳನ್ನು ಬಡಿದೆಬ್ಬಿಸಿದ್ದವು. ಮಗಳು ಓಹಿಲೇಶ್ವರಿ ಶಾಲೆಗೆ ಹೋಗುತ್ತಿದ್ದಾಗ ,ಅವಳ ಶಾಲೆಯ ಸುತ್ತಮುತ್ತ ಉಂಟಾಗಿತ್ತಿದ್ದ ಟ್ರಾಫಿಕ್ ಸಮಸ್ಯೆಯನ್ನು ಕಂಡು ಬೇಸತ್ತ ಕಾವೇರಿ ಟ್ರಾಫಿಕ್ ಇಲಾಖೆಗೆ ದೂರುಕೊಟ್ಟು ಬ್ಯಾರಿಕೇಡ್ ಸೌಲಭ್ಯಕ್ಕಾಗಿ ಕೋರಿದರು, ಇಲಾಖೆಯಿಂದ ಯಾವುದೇ ಸೌಲಭ್ಯ ಸಿಗದಿದ್ದಾಗ, ಒಂದು ಬೋರ್ಡ ಮೇಲೆ ‘ಏಕ ಮುಕ ಸಂಚಾರ(One Way)ಎಂದು ಬರೆದು ತಾವೇ ಟ್ರಾಫಿಕ್ ನಿಯಂತ್ರಿಸಲು ನಿಂತುಬಿಟ್ಟರು. ಹಲವರು ಶಾಲೆ ಆವರಣವೆಂದು ಭಾವಿಸಿದರೆ ಇನ್ನು ಕೆಲವರು ಕಾವೇರಿ ವಿರುದ್ದ ‘ನೀವ್ಯಾರು ಇದನ್ನು  ಕೇಳೋದಕ್ಕೆ’ ಎಂದು ಪ್ರಶ್ನಿಸಿದರು.ಆದರೆ ಧೃತಿಗೆಡದ ಕಾವೇರಿ ಟ್ರಾಫಿಕ್ ನಿಯಮಗಳನ್ನು ಉಲಂಗಿಸುತ್ತಿದ್ದ ವಾಹನದ ಸಂಖ್ಯೆಗಳನ್ನು ಬರೆದಿಟ್ಟುಕೊಂಡು ಇಲಾಖೆಗೆ ದೂರುಕೊಟ್ಟರು. ಕ್ರಮೇಣ ನಂತರದ ದಿನಗಳಲ್ಲಿ ನಿಯಮ ಪಾಲನೆಯಲ್ಲಿ ತಕ್ಕ ಮಟ್ಟಿನ ಸುಧಾರಣೆ ಕಂಡುಬಂದಿತು. ಕಾವೇರಿಯನ್ನು ಕಂಡು ಇನ್ನು ಹಲವಾರು ಪೋಷಕರು ಸಹಕಾರ ನೀಡಲು ಮುಂದಾದರು. ಇದು ಕಾವೇರಿಯವರ ಪ್ರಾಮಾಣಿಕ ಪ್ರಯತ್ನಕ್ಕೆ ಸಂದ ಮೊದಲ ಗೆಲುವು. ಇವತ್ತಿಗೂ ಆ ಶಾಲೆಯ ಸುತ್ತಮುತ್ತ ಪೋಷಕರೆ ಟ್ರಾಫಿಕ್ ನಿರ್ವಹಿಸುತ್ತಾರೆ ಎಂದು ಹೇಳುವ ಕಾವೇರಿಯವರ ಮಾತಿನಲ್ಲಿ ಮತ್ತಷ್ಟು ಸಮಾಜಪರ ಕೆಲಸ ಮಾಡುವ ಹಂಬಲ ಹಾಗು ಛಲ ಎದ್ದು ಕಾಣುತ್ತಿತ್ತು .ಇಂತಹ ಸಾಕಷ್ಟು ಘಟನೆಗಳು ಕಾವೇರಿಯವರಿಗೆ ತಮ್ಮ ನಾಯಕತ್ವದಗುಣದ ಬಗ್ಗೆ ಪರಿಚಯಮಾಡಿಕೊಟ್ಟಿದ್ದು, ಮುಂದೆ ರಾಜಕಾರಣಕ್ಕೆ ಕಾಲಿಡಲು ನಾಂದಿಹಾಡಿದೆ.

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರ ಇರುತ್ತದೆ ಎಂಬ ನುಡಿಗಟ್ಟು ಕಾವೇರಿಯವರ ಜೀವನಕ್ಕೆ ಅನ್ವಯವಾದಂತಿದೆ. ಆದರೆ ಇಲ್ಲಿ ಹೆಂಡತ್ತಿಯ ಯಶಸ್ಸಿಗೆ ಅವರ ಪತಿಯು ನೆರಳಾಗಿದ್ದಾರೆ.  ಕಾವೇರಿಯವರ ಯಶಸ್ಸನಲ್ಲಿ ಅವರ ಪತಿ ಕೇದಾರ್‍ನಾಥ್‍ರವರು ಬಹುಪಾಲು ವಹಿಸಿದ್ದು ತಮ್ಮ ಮಡದಿಯ ಎಲ್ಲಾ ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸಮಾಜಸೇವೆ ಮಾಡಲು ಚುನಾಹಿತ ಪ್ರತಿನಿಧಿಯಾಗಲೇಬೇಕೆಂಬ ಅವಶ್ಯಕತೆಯಿಲ್ಲ, ಅಧಿಕಾರವಿಲ್ಲದಿದ್ದರು ಸಹ ತಮ್ಮ ವಾರ್ಡಿನಲ್ಲಿ ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳಬಹುದು ಎಂದು ಕಾವೇರಿಯವರು ಸಾಭೀತುಪಡಿಸಿದ್ದಾರೆ. ಕಾರ್ಪೊರೇಟರ್‍ರಾಗದೆಯೇ ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಾವೇರಿಯವರಿಗೆ ಅಧಿಕಾರ ಕೊಟ್ಟಲ್ಲಿ ಅವರಿಂದ ಉತ್ತಮ್ಮ ಆಡಳಿತವನ್ನು ನಿರೀಕ್ಷಿಸಬಹುದು ಎಂಬುದು ಅಲ್ಲನ ವಾರ್ಡಿನವರ ಅಭಿಪ್ರಾವಾಗಿದೆ.

ನಮ್ಮ ವ್ಯವಸ್ಥೆ ಹಾಗು ಕಾನೂನುಗಳ ಅರಿವಿಲ್ಲದ ಕಾರಣ ಜನರು ಸಾಮಾಜಿಕ ಸಮಸ್ಯೆಗಳೊಂದಿಗೆ ಹೊಂದಿಕೊಳ್ಳುತ್ತಾರೆ ಎಂಬುದು ಇವರ ಅಭಿಪ್ರಾಯ.ತೆರಿಗೆಕಟ್ಟುವ ಪ್ರಜೆಗಳ ತೊಂದರೆಗಳನ್ನು ಆಲಿಸುವುದಕ್ಕೆ ಇರುವ ಅಧಿಕಾರಿಗಳ ಸದ್ಬಳಕೆ ಮಾಡಿಕೊಳ್ಳುವುದು ಕೇವಲ ನಮ್ಮ ಹಕ್ಕಲ್ಲ ಅದು ನಮ್ಮ ಜವಬ್ದಾರಿ, ಎಂಬ ಕರೆಕೊಟ್ಟ ಕಾವೇರಿಯವರ ಗುರಿ ಮತ್ತು ಹಾದಿ ಯಶಸ್ವಿಯಾಗಲಿ ಎಂದು ಈ ಮೂಲಕ ಬಿ.ಪ್ಯಾಕ್ ವತಿಯಿಂದ ಹಾರೈಸುತ್ತೇವೆ.